ದಿನಾಂಕ 31/05/19 ರಂದು ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಬಿ ಆರ್ ಉದಯಕುಮಾರ್ರವರು ಕಾರ್ಯಕ್ರಮ ಉದ್ಘಾಟಿಸಿ ರೋಗಿಗಳಿಗೆ ಗುಣಮುಖರಾಗಲು ಔಷಧಿಗಿಂತಲೂ ವೈದ್ಯರು ನೀಡುವ ಭರವಸೆ ಪರಿಣಾಮಕಾರಿಯಾದ ಮದ್ದಾಗಬಲ್ಲದು, ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರವು ಉತ್ತಮ ಹಂತದಲ್ಲಿ ಸುಧಾರಣೆಯಾಗಿದ್ದು ಖಾಸಗಿ ವಲಯದಲ್ಲಿ ಉನ್ನತ ದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಜಿಲ್ಲೆ ಸಮರ್ಥವಾಗಿದೆ ಎಂದು ಹೇಳಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂಧಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಕೆ ಮಾಯಣ್ಣ ಗೌಡರವರು ಸಂಸ್ಥೆಯು ವಾರ್ಷಿಕೋತ್ಸವದ ನಿಮಿತ್ತ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಒಂದು ವಿಭಿನ್ನ ಹಾಗೂ ಶ್ರೇಷ್ಠ ಕಾರ್ಯವಾಗಿದೆ. ಜನರು ಖಾಯಿಲೆಗಳಿಗೆ ತುತ್ತಾಗುವ ವರೆಗೂ ಕಾಯದೆ ಅವುಗಳ ಗುಣಲಕ್ಷಣಗಳ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿತುಕೊಳ್ಳುವುದರಿಂದ ಆರೋಗ್ಯದಾಯಕ ಜೀವನ ನಡೆಸಬಹುದು ಎಂದು ಸಂದೇಶವಿತ್ತರು.
ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ ಬಿ ಕೆ ಸೌಮ್ಯಮಣಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಲಕಾಲಕ್ಕೆ ನಿಯಮಿತವಾದ ಪರೀಕ್ಷೆಗಳು, ಉತ್ತಮವಾದ ಜೀವನ ಶೈಲಿ, ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ಇವುಗಳನ್ನು ಅಳವಡಿಸಿಕೊಂಡು ಎಲ್ಲರೂ ಆರೋಗ್ಯವಾಗಿರಬೇಕೆಂದು ಹಾರೈಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕರಾದ ಡಾ ಜೆ ಕೆ ಯತೀಶ್ ಕುಮಾರ್ರವರು ಸಂಸ್ಥೆಯಲ್ಲಿ ದೊರೆಯುವ ಉನ್ನತ ದರ್ಜೆಯ ವೈದ್ಯಕೀಯ ಸೇವೆಗಳು ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು. ವಿಶ್ವ ತಂಬಾಕು ದಿನವನ್ನು ಪ್ರಸ್ತಾಪಿಸಿ ಮಾತನಾಡಿ ತಂಬಾಕಿನ ಉತ್ಪನ್ನಗಳಿಂದ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ತಂಬಾಕು ನಿಷೇಧವನ್ನು ಕುರಿತು ಜಾಗೃತಿ ಕಾರ್ಯಗಳು ಹೆಚ್ಚಬೇಕಿದೆ ಎಂದರು. ಸಂಸ್ಥೆಯು 12 ವರ್ಷಗಳ ಯಶಸ್ವಿ ಆರೋಗ್ಯ ಸೇವೆಯನ್ನು ನೀಡುವಲ್ಲಿ ಸಹಕಾರಿಯಾದ ಸರ್ವರಿಗೂ ಕೃತಜ್ಞತಾ ಪೂರ್ವಕವಾಗಿ ಉಚಿತ ಶಿಬಿರವನ್ನು ಆಯೋಜಿಸಲಾಗಿದ್ದು ಎಲ್ಲರೂ ಅದರ ಸದುಪಯೋಗ ಪಡೆಯುವಂತೆ ಕೋರಿದರು.
ಮಕ್ಕಳ ತಜ್ಞರಾದ ಡಾ ದಿನೇಶ್ ಸ್ವಾಗತಿಸಿದರು, ಮಾನಸಿಕ ತಜ್ಞೆ ಡಾ ಸುನೀತಾ ನಿರೂಪಿಸಿದರು, ವ್ಯವಸ್ಥಾಪಕರಾದ ಶ್ರೀ ಫ್ರಾನ್ಸಿಸ್ ದೀಪಕ್ ವಂದಿಸಿದರು.
ಶಿಬಿರದಲ್ಲಿ ಎಲ್ಲಾ ವಿಭಾಗಗಳ ವೈದ್ಯರೊಡನೆ ಉಚಿತ ಸಂದರ್ಶನ ಮತ್ತು ಔಷಧಗಳನ್ನು ನೀಡಲಾಯಿತು, 50% ರಿಯಾಯಿತಿ ದರದಲ್ಲಿ ಅಗತ್ಯ ಪರೀಕ್ಷೆಗಳನ್ನು ನಡೆಸಲಾಯಿತು.
ಸಾರ್ವಜನಿಕರ ಮಾಹಿತಿ ಮತ್ತು ವೀಕ್ಷಣೆಗಾಗಿ ಆಸ್ಪತ್ರೆಯ ಆವರಣದಲ್ಲಿ ರೋಗಗಳ ಲಕ್ಷಣಗಳನ್ನು ಚಿತ್ರವಿವರಣೆ ಸಹಿತವಾಗಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಸುಮಾರು 250ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ಜೀರ್ಣಾಂಗವ್ಯೂಹ ಶಸ್ತ್ರಚಿಕಿತ್ಸಾ ತಜ್ಞರಾದ ಡಾ ಸಿದ್ದರಾಮು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ ಬಿಂಬ ಹಾಗೂ ಆಸ್ಪತ್ರೆಯ ಸಿಬ್ಬಂಧಿ ವರ್ಗ ಹಾಜರಿದ್ದರು.



Leave a Reply